ಒಟ್ಟು 758 ಕಡೆಗಳಲ್ಲಿ , 1 ವಚನಕಾರರು , 756 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಚಂದ್ರ ಮಾರ್ತಾಂಡರನು | ಸಂಧಿಸಿಯೇ ಪರಿವೇಷ | ಕುಂದದಲೆ ನಿಚ್ಚ ಬರುತ್ತಿರಲು ಜಗವೆಲ್ಲ | ಕುಂದಿದಂತಿಹುದು ಸರ್ವಜ್ಞ |\
ಚರಜೀವನು ತಿಂದು | ಚರಿಸುವದು ಜಗವರ್ಧ | ಚರಿಸದಾ ಜೀವಿಗಳೆ ತಿಂದು ಜಗವರ್ಧ | ಚರಿಸುವದು ನೋಡು ಸರ್ವಜ್ಞ ||
ಚಲುವನಾದಡದೇನು ? | ಬಲವಂತನಹದೇನು ?| ಕುಲವೀರನಾಗಿ ಫಲವೇನು ? ಮಹಲಕ್ಷ್ಮಿ | ತೊಲಗಿ ಹೋಗಿರಲು | ಸರ್ವಜ್ಞ ||
ಚಿತ್ತವಿಲ್ಲದ ಗುಡಿಯ | ಸುತ್ತಿದೊಡೆ ಫಲವೇನು ? | ಎತ್ತು ಗಾಣವನು ಹೊತ್ತು ತಾ ನಿತ್ಯದಲಿ | ಸುತ್ತಿಬಂದಂತೆ ಸರ್ವಜ್ಞ ||
ಚೇಳನೇರಲು ಗುರುವು | ಕಾಳಗವು ಪಿರಿದಕ್ಕು | ಗಾಳಿಯಿಂ ವೇಳೆಯು ಕಿರಿದಕ್ಕು ಬೆಳೆಯಿಲ್ಲ | ಕೋಲಾಗವಕ್ಕು ಸರ್ವಜ್ಞ ||
ಜಂಗಮಕೆ ವಂಚಿಸನು | ಹಿಂಗಿರಲು ಲಿಂಗವನು | ಭಕ್ತರೊಳು ಪರಸತಿಗೆ ಒಲೆಯದಗೆ | ಭಂಗವೇ ಇಲ್ಲ ಸರ್ವಜ್ಞ ||
ಜಂಗಮನು ಭಕ್ತತಾ | ಲಿಂಗದಂತಿರಬೇಕು | ಭಂಸುತ ಪರರ ನಳಿವ ಜಂಗಮನೊಂದು | ಮಂಗನೆಂದರಿಗು ಸರ್ವಜ್ಞ ||
ಜಾಜಿಯಾ ಹೂ ಲೇಸು | ತೇಜಿವಾಹನ - ಲೇಸು | ರಾಜಮಂದಿರದೊಳಿರಲೇಸು ತಪ್ಪುಗಳ | ಮಾಜುವದು ಲೇಸು ಸರ್ವಜ್ಞ ||
ಜಾಣ ಜಾಣಗೆ ಲೇಸು | ಕೋಣ ಕೋಣಗೆ ಲೇಸು | ನಾಣ್ಯವದು ಲೇಸು ಜನರಿಂಗೆ ಊರಿಂಗೆ | ಗಾಣಿಗನು ಲೇಸು ಸರ್ವಜ್ಞ ||
ಜಾಣೆಯಾ ನುಡಿ ಲೇಸು | ವೀಣೆಯಾ ಸ್ವರ ಲೇಸು | ಮಾಣದಲೆ ವದನ ಶುಚಿ ಲೇಸು | ಕೂರ್ಪವರ | ಕಾಣುವದೆ ಲೇಸು ಸರ್ವಜ್ಞ ||
ಜಾತಿ-ಜಾತಿಗೆ ವೈರ | ನೀತಿ ಮೂರ್ಖಗೆ ವೈರ | ಪಾತಕವು ವೈರ ಸುಜನರ್ಗೆ ಅರಿದರಿಗೆ ಏತರದು ವೈರ ಸರ್ವಜ್ಞ ||
ಜಾತಿಹೀನರ ಮನೆಯ | ಜ್ಯೋತಿ ತಾ ಹೀನವೇ | ಜಾತಿ-ವಿಜಾತಿಯೆನ್ನಬೇಡ ದೇವನೊಲಿ | ದಾತನೇ ಜಾತ ಸರ್ವಜ್ಞ ||
ಜಾರತ್ವವೆಂಬುವದು | ಕ್ಷೀರಸಕ್ಕರೆಯಂತೆ | ಊರಲ್ಲಿ ಒಬ್ಬರರಿತಿಹರೆ ಬೇವಿನಾ | ಸಾರದಂತಿಹುದು ಸರ್ವಜ್ಞ ||
ಜಾರಿ ನೆರೆ ಸೇರುವಗೆ | ತೂರರೊಳು ಹೋರುವಗೆ | ಊರಿರುಳ ನಾರಿ ಕಳುವಂಗೆ ತಿಳಿಯದಲೆ | ಮಾರಿ ಬಂದಿಹುದು ಸರ್ವಜ್ಞ ||
ಜಾವಕ್ಕೆ ಬದುಕುವರೆ | ಹೇವಕ್ಕೆ ಬದುಕುವದು | ರಾವಣನು ಸತ್ತನೆನಬೇಡ ರಾಮಂಗೆ | ಹೇವ ಬಿಟ್ಟಿಹುದು ಸರ್ವಜ್ಞ ||