ಒಟ್ಟು 1514 ಕಡೆಗಳಲ್ಲಿ , 1 ವಚನಕಾರರು , 602 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ದಾರದಿಂದಲೇ ಮುತ್ತು | ಹಾರ್‍ಅವೆಂದೆನಿಸುಹುದು | ಆರೈದು ನಡೆವ ದ್ವಿಜರುಗಳ ಸಂಸರ್ಗ | ವಾರಿಂದ ಲಧಿಕ ಸರ್ವಜ್ಞ ||
ದಾಸಿಯಾ ಕೊಡದಂತೆ | ಸೋರದಿಪ್ಪುದೆ ಯೋಗ | ದಾಸಿ ಸಾಸಿರದ ಒಡನಾಡುತಾ ಕೊಡದೊ | ಳಾಶೆ ಇಪ್ಪಂತೆ ಸರ್ವಜ್ನ್ಯ ||
ದಿನಪತಿಗೆ ಎಣೆಯಿಲ್ಲ | ಧನಪತಿ ಸ್ಥಿರವಲ್ಲ | ಅನುಭವಿಗೆ ಬೇರೆ ಮತವಿಲ್ಲ ಅರಿದಂಗೆ | ಮುನಿವವರೆ ಇಲ್ಲ ಸರ್ವಜ್ಞ ||
ದುರ್ಗಿ(ಮಾರಿಯ ಮುಂಡಿ) | ಯಗ್ಗದ ಶಕ್ತಿಗಳು ಸದ್ಗುಣ ಸತ್ಯ ಮುಸುರಿಹರ - ಮುಟ್ಟವು ಸದ್ಗುರುವಿನಾಜ್ಞೆ ಸರ್ವಜ್ಞ
ದೇಶಕ್ಕೆ ಸಜ್ಜನನು | ಹಾಸ್ಯಕ್ಕೆ ಹನುಮಂತ ಕೇಶವ ಭಕ್ತರೊಳಗೆಲ್ಲ - ಮೂರು ಕ ಣ್ಣೇಶನೇ ದೈವ ಸರ್ವಜ್ಞ
ದೇಹ ದೇವಾಲಯವು | ಜೀವವೇ ಶಿವಲಿಂಗ | ಬಾಹ್ಯಾಂಗಳಳಿದು ಭಜಿಪಂಗೆ ಮುಕ್ತಿಸಂ ದೇಹವಿಲ್ಲೆಂದು ಸರ್ವಜ್ಞ ||
ದೇಹಿಯೆನಬೇಡ ನಿ | ದೇಹಿ ಜಂಗಮ ದೇವ ದೇಹಗುಣದಾಶೆಯಳಿದರೆ - ಆತ ನಿ ದೇಹಿ ಕಂಡಯ್ಯ ಸರ್ವಜ್ಞ
ದ್ವಿಜನಿಂಗೆ ಸಾಮರ್ಥ್ಯ | ಭುಜಗಂಗೆ ಕಡುನಿದ್ರೆ | ಗಜಪತಿಗೆ ಮದವು ಅತಿಗೊಡೆ ಲೋಕದಾ | ಪ್ರಜೆಯು ಬಾಳುವರೇ ಸರ್ವಜ್ಞ ||
ದ್ವಿಜನಿಮ್ಮೆ ಜನಿಸಿ ತಾ | ನಜನಂತೆ ಜಿಗಿಯುವನು | ದ್ವಿಜನೆಲ್ಲರಂತೆ ಮದಡನಿರೆ ಋಜುವಿಂ | ದ್ವಿಜತಾನಹನು ಸರ್ವಜ್ಞ ||
ಧನಕನಕವುಳ್ಳವನ-ದಿನಕರನ ವೋಲಕ್ಕು | ಧನಕನಕ ಹೋದ ಮರುದಿನವೆ ಹಾಳೂರು ಶುನಕನಂತಕ್ಕು ಸರ್ವಜ್ಞ ||
ಧರೆಯಲ್ಲಿ ಹುಟ್ಟಿ ಅಂ | ತರದಲ್ಲಿ ಓಡುವದು | ಮೊರೆದೇರಿ ಕಿಡಿಯನುಗುಳುವದು ಕವಿಗಳೇ | ಅರಿದರಿದು ಪೇಳಿ ಸರ್ವಜ್ಞ ||
ಧಾತು ಏಳನು ಕಲೆತು | ಭೂತಪಂಚಕವಾಗಿ | ಓತು ದೇಹವನು ಧರಿಸಿರ್ದ ಮನುಜರ್ಗೆ | ಜಾತಿಯತ್ತಣದು ಸರ್ವಜ್ಞ ||
ನಟ್ಟಡವಿಯಾ ಮಳೆಯು | ದುಷ್ಟರಾ ಗೆಳೆತನವು | ಕಪ್ಪೆಯಾದವಳ ತಲೆಬೇನೆ ಇವು ಮೂರು ಕೆಟ್ಟರೇ ಲೇಸು ಸರ್ವಜ್ಞ ||
ನಡೆವುದೊಂದೇ ಭೂಮಿ | ಕುಡಿವುದೊಂದೇ ನೀರು | ಸುಡುವಗ್ನಿಯೊಂದೇ ಇರುತಿರೆ ಕುಲಗೋತ್ರ | ನಡುವೆ ಎತ್ತಣದು ಸರ್ವಜ್ಞ ||
ನಂದೆಯನು ಭದ್ರೆಯನು | ಒಂದಾಗಿ ಅರ್ಧಿಸಲು | ಅಂದಿನ ತಿಥಿಯ ಸಮನಾಗೆ ಗ್ರಹಣ ತಾ | ಮುಂದೆ ಬಂದಕ್ಕು ಸರ್ವಜ್ಞ ||